ಜಮಾಲಿಗುಡ್ಡ ನಾಯಕನ ಏರಿಳಿತದ ಜೀವನ 4/5 ****
Posted date: 31 Sat, Dec 2022 02:20:25 PM
ಜಮಾಲಿಗುಡ್ಡ  ಒಂದು ರೆಟ್ರೋ ಕಥೆ, ತೊಂಭತ್ತರ ದಶಕದ ಲವ್ ಸ್ಟೋರಿ. ನಾಯಕ ಕೃಷ್ಣ(ಧನಂಜಯ). ಬಾರ್ ಸಪ್ಲೈಯರ್, ಒಮ್ಮೆ ಗೆಳೆಯನ ಸಲಹೆಯಂತೆ ಮಸಾಜ್ ಮಾಡಿಸಿಕೊಳ್ಳಲು ಸ್ಪಾ ವೊಂದಕ್ಕೆ ಹೋಗುತ್ತಾನೆ. ಅಲ್ಲಿ ಕೆಲಸ ಮಾಡುವ ರುಕ್ಮಿಣಿಯ(ಅದಿತಿ ಪ್ರಭುದೇವ) ಪರಿಚಯವಾಗಿ ಇಬ್ಬರೂ ಆತ್ಮೀಯರಾಗುತ್ತಾರೆ. ಆಕೆಯ ಹಿನ್ನೆಲೆ ಅರಿತ ಕೃಷ್ಣ ಅವಳನ್ನೇ  ಮದುವೆಯಾಗಲು ಮುಂದಾಗುತ್ತಾನೆ. ತಾನೊಂದು ಬಗೆದರೆ ದೈವ ಒಂದು ಬಗೆಯಿತು ಎನ್ನುವ ಹಾಗೆ  ದುರ್ಘಟನೆಯೊಂದು ನಡೆದು ಕೃಷ್ಣ ಜೈಲು ಸೇರಬೇಕಾಗುತ್ತದೆ. ಅಲ್ಲಿಂದ ಆತನ ಮತ್ತೊಂದು ಜರ್ನಿ ಶುರುವಾಗುತ್ತದೆ. ಯುವಕನೊಬ್ಬನ ಬಾಳಿನಲ್ಲಿ ಎದುರಾಗುವ ಸಂದರ್ಭಗಳು, ಪ್ರೀತಿ, ಗೊಂದಲಗಳ ನಡುವೆ ಸಾಗುವ ಪಯಣವೇ ಜಮಾಲಿಗುಡ್ಡ.  ಜೈಲಿನಲ್ಲಿ  ಕೃಷ್ಣನಿಗೆ ಮತ್ತೊಬ್ಬ ಅಪರಾಧಿ(ಯಶ್ ಶೆಟ್ಟಿ) ಗೆಳೆಯನಾಗುತ್ತಾನೆ. ಇಬ್ಬರೂ ಸೇರಿ ಜೈಲಿಂದ ತಪ್ಪಿಸಿ ಕೊಳ್ಳುತ್ತಾರೆ. ದಾರಿಯಲ್ಲಿ ಮನೆ ಮುಂದೆ ಇದ್ದ ಕಾರನ್ನ  ಅಪಹರಿಸಿ‌ ಅದರಲ್ಲೇ ಮುಂದೆ ಸಾಗುತ್ತಾರೆ. ಅದೇ ಕಾರಿನ  ಹಿಂಬದಿ ಸೀಟಲ್ಲಿರುವ  ಹೆಣ್ಣು ಮಗುವೊಂದು ಅವರಿಗೆ  ಕಾಣಿಸುತ್ತದೆ. ಅದೊಂದು  ಅಂಗವಿಕಲ ಮಗುವಾಗಿದ್ದು, ಪೋಷಕರು  ಶ್ರೀಮಂತರೆಂದು ತಿಳಿಯುತ್ತದೆ.  ಆ ಮಗುವನ್ನು ದಾರಿಯಲ್ಲೇ  ಬಿಡುವಂತೆ ಇಬ್ಬರ ನಡುವೆ ಜಗಳವಾಗುತ್ತದೆ. 
 
ಇಬ್ಬರ ನಡುವಿನ ಗಲಾಟೆಯಲ್ಲಿ ಒಬ್ಬ ಕಳೆದುಕೊಳ್ಳುತ್ತಾನೆ. ದಟ್ಟಾರಣ್ಯದ ನಡುವೆ, ಕಗ್ಗತ್ತಲ ರಾತ್ರಿಯಲ್ಲಿ  ಸಾಗುವಾಗ  ಮನೆಯೊಂದು ಕಾಣಿಸುತ್ತದೆ, ಅಲ್ಲಿ  ಕೃಷ್ಣ ಹಾಗೂ ಆ ಮಗು ಆಶ್ರಯ ಪಡೆಯುತ್ತಾರೆ. ಮರುದಿನ  ಬೆಳಿಗ್ಗೆ ಅಲ್ಲಿಗೆ  ಪೊಲೀಸರ ಎಂಟ್ರಿಯಾಗಿ  ಚಿತ್ರಕಥೆಗೆ ಹೊಸ ಟ್ವಿಸ್ಟ್ ಸಿಗುತ್ತದೆ. ಹೀಗೇ ಕಥೆಯಲ್ಲಿ ಬರುವ ಘಟನೆಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು  ಚಿತ್ರ ಕ್ಲೈಮ್ಯಾಕ್ಸ್  ಹಂತಕ್ಕೆ ಬಂದು ನಿಲ್ಲುತ್ತದೆ.  ಇಲ್ಲಿ  ಕೃಷ್ಣ ರುಕ್ಮಿಣಿ ಕಥೆ ಏನಾಯ್ತು, ಆ ಮಗು ಯಾರದು, ಈ ಎಲ್ಲದಕ್ಕೂ ಉತ್ರರ ಬೇಕೆಂದರೆ  ಥೇಟರಿಗೆ ಹೋಗಿ  ಜಮಾಲಿಗುಡ್ಡ  ನೋಡಲೇಬೇಕು.
 
ಇನ್ನು ಡಾಲಿ ಧನಂಜಯ  ತಡವರಿಸುತ್ತ ಮಾತಾಡುವ  ಮುಗ್ಧ ಹುಡುಗ ಕೃಷ್ಣನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಬಾಲನಟಿ ಪ್ರಾಣ್ಯರಾವ್ ಕೂಡ ಅದ್ಭುತವಾಗಿ ಅಭಿನಯಿಸಿದ್ದಾಳೆ. ಯಶ್ ಶೆಟ್ಟಿ  ಕ್ರೂರ ಮುಖದ ವ್ಯಕ್ತಿಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನಾಯಕಿ  ಅದಿತಿ ಪ್ರಭುದೇವಾ ಹಳ್ಳಿಯ ಹುಡುಗಿಯಾಗಿ ಮತ್ತು  ಸ್ಪಾ ಗರ್ಲ್ ಆಗಿ ಎರಡು ಶೇಡ್‌ಗಳಲ್ಲಿ  ಕಾಣಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ತ್ರಿವೇಣಿರಾವ್, ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ, ನಂದಗೋಪಾಲï, ಕಾಮಿಡಿ ಕಿಲಾಡಿ  ಸಂತು ಸೇರಿದಂತೆ ಎಲ್ಲಾ ಪಾತ್ರಧಾರಿಗಳು  ತಮಗೆ ಕೊಟ್ಟ ಅವಕಾಶವನ್ನು ಸಮರ್ಥವಾಗಿ  ನಿಭಾಯಿಸಿದ್ದಾರೆ.
 
ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಇಂಪಾಗಿವೆ. ಹಿನ್ನೆಲೆ ಸಂಗೀತ ನೀಡಿರುವ ಅನುಪ್ ಸೀಳಿನ್ ಅವರ ಕೆಲಸ ಚಿತ್ರದ  ಮತ್ತೊಂದು ಹೈಲೈಟ್. ಇನ್ನು ಕಾರ್ತಿಕ್ ಅವರ  ಕ್ಯಾಮೆರಾ ಕೈಚಳಕದಲ್ಲಿ  ಬಾಬಾಬುಡನ್‌ಗಿರಿಯ ಸೊಬಗು  ಸೊಗಸಾಗಿ ಬಂದಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed